Sunday, August 26, 2012

Monorail Seeding: Delhi Engineers visit Hubli

ಮೊಳಕೆಯಲ್ಲಿ ಮೋನೊ ರೈಲು: ದೆಹಲಿ ಎಂಜಿನಿಯರ್*ಗಳ ತಂಡ ಭೇಟಿ




ಹುಬ್ಬಳ್ಳಿ : ಮುಂಬಯಿ ಮಾದರಿಯಲ್ಲಿಯೇ ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಮೋನೊ ರೈಲು ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಮುಂದಾಗಿದ್ದು, ಮಂಗಳವಾರ ಯೋಜನೆಯ ರೂಪುರೇಷಗಳ ಕುರಿತು ಚರ್ಚೆ ನಡೆಸಲು ಹೊಸದೆಹಲಿಯಿಂದ ಆಗಮಿಸಿದ ವಿಶೇಷ ತಂಡ ನಗರಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿತು.

ಹೊಸದೆಹಲಿಯ ಎಂಜಿನಿಯರಿಂಗ್ ಕನ್ಸಲ್ಟನ್ಸಿ ಇಂಡಿಯಾದ ಹೆಚ್ಚುವರಿ ಅಭಿಯಂತರ ಕೆ.ಜೆ. ರಂಗನಾಥ ನೇತೃತ್ವದ ತಂಡ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ, ಯೋಜನೆ ಸಾಧ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡಿತು. ಮಹಾನಗರದಲ್ಲಿ ಮೋನೊ ರೈಲು ಸಂಚರಿಸುವ ವ್ಯಾಪ್ತಿ, ಯೋಜನೆಗೆ ಬೇಕಾಗುವ ಅಗತ್ಯ ಭೂಮಿ, ತಗುಲುವ ವೆಚ್ಚ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಹುಡಾ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ಮೋನೊ ರೈಲು ಸಂಚಾರ ವ್ಯವಸ್ಥೆ ಮೆಟ್ರೊ ರೈಲ್*ಗಿಂತ ಭಿನ್ನವಾಗಿದ್ದು, ಸಿಂಗಲ್ ಟ್ರ್ಯಾಕ್ ಮೇಲೆ ಸಂಚರಿಸಬಲ್ಲದು. ಹೀಗಾಗಿ ಫುಟಪಾತ್ ಮೇಲೆ ಎತ್ತರದ ಸಿಮೆಂಟ್ ಫಿಲ್ಲರ್ ಎಬ್ಬಿಸಿ ಅದರ ಮೇಲೆ ರೈಲು ಟ್ರ್ಯಾಕ್ ನಿರ್ಮಿಸಬಹುದಾಗಿದೆ. ಹೀಗಾಗಿ ಈ ಯೋಜನೆಗೆ ಅಗತ್ಯ ಸೌಕರ್ಯ ನಗರದ ಎಲ್ಲ ಪ್ರದೇಶದಲ್ಲಿ ಲಭ್ಯವಿದೆ. ಯೋಜನೆ ಅನುಷ್ಠಾನಕ್ಕೆ ಯಾವುದೇ ಅಡ್ಡಿ- ಆತಂಕಗಳು ಇಲ್ಲ ಎಂದು ಹುಡಾ ಅಧಿಕಾರಿಗಳು ರಂಗನಾಥ್ ಅವರಿಗೆ ಮಾಹಿತಿ ನೀಡಿದರು.

ಎಲ್ಲೆಲ್ಲಿ ಮೋನೊ ರೈಲು?
ಎಂಜನಿಯರಿಂಗ್ ಕನ್ಸಲ್ಟನ್ಸಿ ಇಂಡಿಯಾದ ಅಭಿಯಂತರರಿಗೆ ಮೋನೊ ರೈಲು ಸಂಚರಿಸುವ ಪ್ರಮುಖ ಸ್ಥಳಗಳ ಬಗ್ಗೆ ಹುಡಾ ಅಧಿಕಾರಿಗಳು ಮಾಹಿತಿ ನೀಡಿದರು. ಹುಬ್ಬಳ್ಳಿ- ಧಾರವಾಡ ವ್ಯಾಪ್ತಿಯ 60 ಕಿ.ಮೀ. ಪ್ರದೇಶದಲ್ಲಿ ರೈಲ್ವೆ ಟ್ರ್ಯಾಕ್ ನಿರ್ಮಾಣದ ಅವಶ್ಯಕತೆ ಇದೆ. ಹುಬ್ಬಳ್ಳಿಯ ಹಳೇಬಸ್ ನಿಲ್ದಾಣದಿಂದ ದುರ್ಗದಬೈಲ್, ಸಿಬಿಟಿ, ರೈಲ್ವೆಸ್ಟೆಷನ್, ಸಿದ್ದಾರೂಢಮಠ, ಕುಸುಗಲ್ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವುದು ಅಗತ್ಯ. ಧಾರವಾಡ ಆಲೂರು ವೆಂಕಟರಾವ್ ವೃತ್ತದಿಂದ, ರೈಲ್ವೆ ಸ್ಟೆಷನ್, ಕರ್ನಾಟಕ ವಿಶ್ವ ವಿದ್ಯಾಲಯ, ಕೃಷಿ ವಿಶ್ವ ವಿದ್ಯಾಲಯ, ಕೆಲಗೇರಿ ರಸ್ತೆ ಹಾಗೂ ಸಿಬಿಟಿಗೆ ಸಂಪರ್ಕ ಕಲ್ಪಿಸುವಂತೆ ಮೋನೊ ರೈಲು ಓಡಿಸಬೇಕು. ಜತೆಗೆ ಉಣಕಲ್*ನಿಂದ ಜೆಎಸ್*ಎಸ್ ಕಾಲೇಜುವರೆಗೂ ಮೋನೊ ರೈಲು ಓಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹುಡಾ ಅಧಿಕಾರಿಗಳು ಮೋನೊ ರೈಲ್ ಮಾರ್ಗಸೂಚಿ ಬಗ್ಗೆ ದೆಹಲಿಯಿಂದ ಆಗಮಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಮೋನೊ ರೈಲು ಯೋಜನೆ ನಿರ್ಮಾಣವನ್ನು ಅಂತಾರಾಷ್ಟ್ರೀಯ ಕಂಪನಿಗೆ ಲೀಸ್ ಮೇಲೆ ನೀಡಿದಲ್ಲಿ, ಅದರಿಂದ ಪ್ರಯಾಣಿಕರ ಮೇಲೆ ಹೊರೆ ಬೀಳಲಿದೆಯೇ ಎಂದು ರಂಗನಾಥ ಅವರನ್ನು ಪ್ರಶ್ನಿಸಿದ ಹುಡಾ ಅಧ್ಯಕ್ಷರು ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ವಿನಂತಿಸಿದರು.

ಯೋಜನೆ ಸಾಧ್ಯತೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅಭಿಯಂತರರು, ಮುಂದಿನ ವಾರ ಮತ್ತೊಂದು ತಂಡ ಆಗಮಿಸಲಿದ್ದು, ಅಧ್ಯಯನ ನಡೆಸುವ ಜತೆಗೆ ಪ್ರಾತ್ಯಕ್ಷಿಕೆ ಮೂಲಕ ಯೋಜನೆಗೆ ಬಗ್ಗೆ ವಿವರಣೆ ನೀಡಲಿದೆ ಎಂದು ವಿವರಿಸಿದರು.

ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ್, ಆಯುಕ್ತ ಆರ್.ಎನ್.ಶಾನಭಾಗ, ಅಧಿಕಾರಿಗಳಾದ ಕವಲೂರ, ಶೀಲವಂತರ, ಜೋಶಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ವಾರ ಸಿಎಂ ಸಭೆ 
ಈ ಕುರಿತಂತೆ ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೋನೊ ರೈಲು ಯೋಜನೆ ಜಾರಿಗೆ ವಿಶೇಷ ಆಸಕ್ತಿ ತೋರಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಚಾಲನೆ ದೊರೆತಂತಾಗಿದ್ದು, ಮುಂದಿನವಾರ ಆಗಮಿಸಲಿರುವ ತಜ್ಞರ ಸಭೆಯನ್ನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆಸಬೇಕೋ ಅಥವಾ ಹುಬ್ಬಳ್ಳಿಯಲ್ಲಿ ನಡೆಸಬೇಕೊ ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ಹೇಳಿದರು.

No comments: